Sunday, 28 February 2016
ಆ ಹುಡುಗಿ ಹಾಗೇ ಇದ್ದಳು . . . ಇಳಿ ಮದ್ಯಾಹ್ನ ಸುಮ್ನೆ ಮನೆಯಿಂದ ಹೊರಬಿದ್ದೆ, ಏನೂ ಕೆಲಸ ಇರ್ಲಿಲ್ಲ ಹಾಗೇ ನಡ್ಕೊಂಡು ಸ್ವಲ್ಪ ದೂರದಲ್ಲಿರೋ ರಿಂಗ್ ರೋಡಿನವರೆಗೂ ಬಂದು ವೆಹಿಕಲ್ ಗಳನ್ನ ನೋಡ್ತಾ ನಿಂತೆ. ಯಾರೋ ನನ್ನನ್ನೇ ನೋಡ್ತಾಯಿದಾರೆ ಅನ್ನಿಸಿ ಆಕಡೆ ತಿರುಗಿದೆ. ಆ ಹೆಣ್ಣುಮಗಳು ನನ್ನನ್ನೇ ನೋಡ್ತಾಯಿದ್ಲು. ನನ್ನ ಹಿಂದೆ ಬೇರೆ ಯಾರಾದ್ರು ಇದಾರಾ ಅಂತ ನೋಡಿದ್ರೆ ಯಾರೂ ಇಲ್ಲ. ನಿಜ, ಆ ಹುಡುಗಿ ನನ್ನನ್ನೇ ನೋಡ್ತಿರೋದು. 'ಇದ್ಯಾರಪ್ಪ' ಅನ್ಕೊಂಡು ಮತ್ತೆ ಆಕೆಯನ್ನ ನೋಡಿದೆ. ಆಕೆ ನಗುತ್ತ 'ಗೊತ್ತಾಗ್ಲಿಲ್ಲ ಹೌದಲ್ಲ?' ಅಂದು ಹತ್ತಿರ ಬಂದಳು and she was pregnant. ನೆನಪು ಏಳು ವರ್ಷ ಹಿಂದೆ ಸಾಗಿತು, ಅದೇ ಧಾರವಾಡಕ್ಕೆ. 'ಗೊತ್ತಾಯ್ತು ಹೇಗಿದಿರಾ ?' ಅಂದಿದ್ದಕ್ಕೆ 'ಇದ್ಯಾಕಲೆ ಇಷ್ಟೊಂದು ಗೌರವ, ನಿನಗಿದೆಲ್ಲ ಸೂಟ್ ಆಗಂಗಿಲ್ಲ ನೋಡು' ಅಂದ್ಲು. 'ಇನ್ನೂ ಹಂಗ ಅದೀ' 'ನಾ ಹೆಂಗ್ ಇದ್ನಿ ಅನ್ನೂದು ನೆನಪದ ನಿಂಗ?' ಅಂತ ಕೇಳಿದಳು. ನಾನು ಸುಮ್ಮನಾದೆ. 'ನನ್ನ ನೆನಪ ಆಗಿತ್ತ ಒಮ್ಮೆರ ?' ಮತ್ತೆ ಕೇಳಿದಳು. ಜೋರಾಗಿ ಉಸಿರು ಬಿಟ್ಟು 'ಇಲ್ಲ' ಎಂಬಂತೆ ಅಡ್ಡಡ್ಡಾ ತಲೆ ಒಗೆದೆ, ಅವಳನ್ನ ನಾನು ಮರೆತುಹೋಗಿದ್ದೆ. 'ಇದಕ ಇಷ್ಟ ಆಕ್ಕಿ ನೋಡ್ಲೆ ನೀ, ನೇರ ನೇರ ಹೇಳ್ತಿ' ಅಂದ್ಲು. 'ಮತ್ತೆ ಏನ್ ಸಮಾಚಾರ ? ಏನ್ ಸುದ್ದಿ ?' ಅಂತ ಕೇಳ್ದೆ 'ಭಾಳ ದಿನಕ್ಕ ಸಿಕ್ಕಿವೀ ಇಲ್ಲೇ ಎಲ್ಲೆರ ಮಿರ್ಚಿ-ಬಜ್ಜಿ ತಿಂದು ಚಾ ಕುಡಿಯುನ, ಗಿರ್ಮಿಟ್ ಸಿಕ್ರ ಇನ್ನೂ ಚಲೋ' ಶುದ್ದ ಕಾಲೇಜಿನ ಧಾಟಿಯಲ್ಲೇ ಹೇಳಿದಳು ಇನ್ ಫ್ಯಾಕ್ಟ್ ಆರ್ಡರ್ ಮಾಡಿದಳು. 'ಗಿರ್ಮಿಟ್ ಸಿಗಾಕ ಇದೇನು ಧಾರವಾಡೆನು?' ಅಂದು ನಕ್ಕೆ ಅವಳು ನಕ್ಕಳು. ಹತ್ತಿರದಲ್ಲಿದ್ದ ಚಿಕ್ಕ ಹೋಟೆಲಿಗೆ ಹೋಗುವಾಗ ನಾವು ಮಾತಾಡಲಿಲ್ಲ. ಇನ್ನೇನು ಹೋಟೆಲಿನೊಳಗೆ ಹೋಗಬೇಕು ಅಷ್ಟರಲ್ಲಿ ನಿಲ್ಲಿಸಿ 'ಸಿಗರೇಟ್ ಸೇದೋದು ಬಿಟ್ಟೀ?' ಕೇಳಿದಳು. 'ಬಿಡೋ ಪ್ರಯತ್ನದಲ್ಲಿದಿನಿ' ಅಂದೆ 'ಇನ್ನೂ ಯಾಕ್ ಸುಳ್ಳು ಹೇಳ್ತಿಯ ಮಾರಾಯ' 'ಇಲ್ಲ ನಿಜವಾಗಲು ಬಿಡಬೇಕು ಅನ್ಕೊಂಡಿದಿನಿ' 'ಹಂಗಂದ್ರ ಅವತ್ತು ನನಗ್ಹೆಳಿದ್ದು ಸುಳ್ಳ ?' ನಾನು ಏನೂ ಮಾತಾಡಲಿಲ್ಲ, ಅವಳಿಗೆ ನಾನು ಯಾವಾಗ 'ಸಿಗರೇಟ್ ಬಿಡೋ ಪ್ರಯತ್ನದಲ್ಲಿದಿನಿ' ಅಂತ ಹೇಳಿದ್ದೇನೋ ಏನೋ ಅಥವಾ ಆ ಕ್ಷಣಕ್ಕೆ ಅವಳಿಂದ ಪಾರಾಗಬೇಕು ಅನ್ಕೊಂಡು ಹಾಗೆ ಹೇಳಿರೋ ಸಾಧ್ಯತೆಗಳಿವೆ. ಆ ಮಾತು ಒತ್ತಟ್ಟಿಗಿರಲಿ, ಅಸಲಿಗೆ ಅವಳು ನೆನಪಾದದ್ದೇ ಈಗ ಏಳು ವರ್ಷಗಳ ನಂತರ ಅವಳನ್ನ ನೋಡಿದ ಮೇಲೆ!. ಬೇರೆ ಸ್ಟಾಪಿಗೆ ಇಳಿಯುವ ಬದಲು ಗೊತ್ತಾಗದೆ ಗಡಿಬಿಡಿಯಲ್ಲಿ ಇಲ್ಲೇ ಬಸ್ ನಿಂದ ಇಳಿದಿದ್ದಳು - ಬಹುಶಃ ಅದೇ ಅದೃಷ್ಟ. 'ನಡಿ ಒಳಗ, ಚಾ ಕುಡಿಯುನ' ಅಂದೆ 'ಬ್ಯಾಡ ಇಲ್ಲೇ ಫುಟ್ ಪಾತ್ ಮೇಲೆ ಚಾ ಕುಡುದ್ರಾತು, ನಿನಗೂ ಸಿಗರೇಟ್ ಸೇದಾಕಾ ಆರಾಮಾಕತಿ'
Saturday, 27 February 2016
ನಮಸ್ಕಾರ
ದಯವಿಟ್ಟು ತಿಳಿಸಿ
ವಿಚಿತ್ರ ವಿಶ್ವದ ವಾಸ್ತವ ಸತ್ಯಗಳು
🔹ರಸ್ತೆಗಳು ವಿಶಾಲವಾಗಿವೆ, ಆದರೆ
ದೃಷ್ಟಿಕೋನ ಸಂಕುಚಿತವಾಗಿವೆ!
🔹ನಾವು ಹೆಚ್ಚು ಖರೀದಿಸುತ್ತೇವೆ, ಆದರೆ
ಕಡಿಮೆ ಉಪಯೋಗಿಸುತ್ತೇವೆ!
🔹ನಮ್ಮ ಮನೆಗಳು ದೊಡ್ಡದಾಗುತ್ತಿವೆ,
ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
🔹ಅನುಕೂಲಗಳು ಹೆಚ್ಚಿವೆ, ಆದರೆ
ಅನುಭವಿಸಲು ಸಮಯವೇ ಇಲ್ಲ!
🔹ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ
ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
🔹ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ
ವಿವೇಚನೆ ಕಡಿಮೆಯಾಗಿದೆ!
🔹ಪರಿಣತರು ಹೆಚ್ಚಿದ್ದಾರೆ,
ಸಮಸ್ಯೆಗಳು ಹೆಚ್ಚಿವೆ!
🔹ಔಷಧಿಗಳು ಹೆಚ್ಚಿವೆ,
ಆರೋಗ್ಯ ಕಡಿಮೆಯಾಗಿದೆ!
🔹ನಾವು ಹೆಚ್ಚು ಗಳಿಸುತ್ತೇವೆ, ಆದರೂ
ನೆಮ್ಮದಿಯಿಂದ ಜೀವಿಸುತ್ತಿಲ್ಲ.
🔹ತುಂಬ ವೇಗವಾಗಿ ಹೋಗುತ್ತೇವೆ,ತುಂಬ
ಬೇಗ ಕೋಪಿಸಿಕೊಳ್ಳುತ್ತೇವೆ!
🔹ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ,
ಬೆಳಿಗ್ಗೆ ತುಂಬ ಬಳಲುತ್ತೇವೆ
🔹ಕಡಿಮೆ ಓದುತ್ತೇವೆ,
ತುಂಬ ಟೀವಿ ನೋಡುತ್ತೇವೆ:
🔹ತೋರಿಕೆಯ ಭಕ್ತಿ ಜಾಸ್ತಿ,
ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
🔹ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ
ನಮ್ಮ ಮೌಲ್ಯಗಳು ಕುಸಿದಿವೆ!
🔹ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ
ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ
ಸುಳ್ಳು ಹೇಳುತ್ತೇವೆ!
🔹ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ,
ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
🔹ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ,
ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು
ಭೇಟಿಯಾಗಲು ಹೋಗುವುದಿಲ್ಲ.
🔹ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ,
ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ!
🔹ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ,
ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ
ಗೋಚರವಾಗುವುದಿಲ್ಲ.
🔹ಬರವಣಿಗೆ ಹೆಚ್ಚಾಗಿದೆ, ಆದರೆ
ಅರಿವು ಕಡಿಮೆಯಾಗಿದೆ!
🔹ಹೆಚ್ಚು ಆಲೋಚಿಸುತ್ತೇವೆ, ಆದರೆ
ಕಡಿಮೆ ಸಾಧಿಸುತ್ತೇವೆ!
🔹ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ,ಆದರೆ
ನೈತಿಕತೆ ಕುಸಿದಿದೆ!
🔹ಇದು ವಿವಿಧ ಭಕ್ಷಗಳ ಕಾಲ, ಆದರೆ
ಕಡಿಮೆ ಜೀರ್ಣಶಕ್ತಿಯ ಕಾಲ
🔹ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
🔹ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ,
ಆದರೆ ಮನೆಯಲ್ಲಿ ಕಾದಾಡುತ್ತೇವೆ!
🔹ಗಂಡ ಹೆಂಡಿರ ದುಡಿಮೆ ಹೆಚ್ಚಾಗಿದೆ,
ಆದರೆ ಸಂಬಂಧಗಳು ಛಿದ್ರಗೊಂಡು
ವಿಚ್ಛೇದನಗಳು ಹೆಚ್ಚಾಗಿವೆ!
🔹ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ
ಮನಶ್ಯಾಂತಿ ಮುರಿದುಬಿದ್ದಿದೆ.