Sunday, 28 February 2016

ಆ ಹುಡುಗಿ ಹಾಗೇ ಇದ್ದಳು . . . ಇಳಿ ಮದ್ಯಾಹ್ನ ಸುಮ್ನೆ ಮನೆಯಿಂದ ಹೊರಬಿದ್ದೆ, ಏನೂ ಕೆಲಸ ಇರ್ಲಿಲ್ಲ ಹಾಗೇ ನಡ್ಕೊಂಡು ಸ್ವಲ್ಪ ದೂರದಲ್ಲಿರೋ ರಿಂಗ್ ರೋಡಿನವರೆಗೂ ಬಂದು ವೆಹಿಕಲ್ ಗಳನ್ನ ನೋಡ್ತಾ ನಿಂತೆ. ಯಾರೋ ನನ್ನನ್ನೇ ನೋಡ್ತಾಯಿದಾರೆ ಅನ್ನಿಸಿ ಆಕಡೆ ತಿರುಗಿದೆ. ಆ ಹೆಣ್ಣುಮಗಳು ನನ್ನನ್ನೇ ನೋಡ್ತಾಯಿದ್ಲು. ನನ್ನ ಹಿಂದೆ ಬೇರೆ ಯಾರಾದ್ರು ಇದಾರಾ ಅಂತ ನೋಡಿದ್ರೆ ಯಾರೂ ಇಲ್ಲ. ನಿಜ, ಆ ಹುಡುಗಿ ನನ್ನನ್ನೇ ನೋಡ್ತಿರೋದು. 'ಇದ್ಯಾರಪ್ಪ' ಅನ್ಕೊಂಡು ಮತ್ತೆ ಆಕೆಯನ್ನ ನೋಡಿದೆ. ಆಕೆ ನಗುತ್ತ 'ಗೊತ್ತಾಗ್ಲಿಲ್ಲ ಹೌದಲ್ಲ?' ಅಂದು ಹತ್ತಿರ ಬಂದಳು and she was pregnant. ನೆನಪು ಏಳು ವರ್ಷ ಹಿಂದೆ ಸಾಗಿತು, ಅದೇ ಧಾರವಾಡಕ್ಕೆ. 'ಗೊತ್ತಾಯ್ತು ಹೇಗಿದಿರಾ ?' ಅಂದಿದ್ದಕ್ಕೆ 'ಇದ್ಯಾಕಲೆ ಇಷ್ಟೊಂದು ಗೌರವ, ನಿನಗಿದೆಲ್ಲ ಸೂಟ್ ಆಗಂಗಿಲ್ಲ ನೋಡು' ಅಂದ್ಲು. 'ಇನ್ನೂ ಹಂಗ ಅದೀ' 'ನಾ ಹೆಂಗ್ ಇದ್ನಿ ಅನ್ನೂದು ನೆನಪದ ನಿಂಗ?' ಅಂತ ಕೇಳಿದಳು. ನಾನು ಸುಮ್ಮನಾದೆ. 'ನನ್ನ ನೆನಪ ಆಗಿತ್ತ ಒಮ್ಮೆರ ?' ಮತ್ತೆ ಕೇಳಿದಳು. ಜೋರಾಗಿ ಉಸಿರು ಬಿಟ್ಟು 'ಇಲ್ಲ' ಎಂಬಂತೆ ಅಡ್ಡಡ್ಡಾ ತಲೆ ಒಗೆದೆ, ಅವಳನ್ನ ನಾನು ಮರೆತುಹೋಗಿದ್ದೆ. 'ಇದಕ ಇಷ್ಟ ಆಕ್ಕಿ ನೋಡ್ಲೆ ನೀ, ನೇರ ನೇರ ಹೇಳ್ತಿ' ಅಂದ್ಲು. 'ಮತ್ತೆ ಏನ್ ಸಮಾಚಾರ ? ಏನ್ ಸುದ್ದಿ ?' ಅಂತ ಕೇಳ್ದೆ 'ಭಾಳ ದಿನಕ್ಕ ಸಿಕ್ಕಿವೀ ಇಲ್ಲೇ ಎಲ್ಲೆರ ಮಿರ್ಚಿ-ಬಜ್ಜಿ ತಿಂದು ಚಾ ಕುಡಿಯುನ, ಗಿರ್ಮಿಟ್ ಸಿಕ್ರ ಇನ್ನೂ ಚಲೋ' ಶುದ್ದ ಕಾಲೇಜಿನ ಧಾಟಿಯಲ್ಲೇ ಹೇಳಿದಳು ಇನ್ ಫ್ಯಾಕ್ಟ್ ಆರ್ಡರ್ ಮಾಡಿದಳು. 'ಗಿರ್ಮಿಟ್ ಸಿಗಾಕ ಇದೇನು ಧಾರವಾಡೆನು?' ಅಂದು ನಕ್ಕೆ ಅವಳು ನಕ್ಕಳು. ಹತ್ತಿರದಲ್ಲಿದ್ದ ಚಿಕ್ಕ ಹೋಟೆಲಿಗೆ ಹೋಗುವಾಗ ನಾವು ಮಾತಾಡಲಿಲ್ಲ. ಇನ್ನೇನು ಹೋಟೆಲಿನೊಳಗೆ ಹೋಗಬೇಕು ಅಷ್ಟರಲ್ಲಿ ನಿಲ್ಲಿಸಿ 'ಸಿಗರೇಟ್ ಸೇದೋದು ಬಿಟ್ಟೀ?' ಕೇಳಿದಳು. 'ಬಿಡೋ ಪ್ರಯತ್ನದಲ್ಲಿದಿನಿ' ಅಂದೆ 'ಇನ್ನೂ ಯಾಕ್ ಸುಳ್ಳು ಹೇಳ್ತಿಯ ಮಾರಾಯ' 'ಇಲ್ಲ ನಿಜವಾಗಲು ಬಿಡಬೇಕು ಅನ್ಕೊಂಡಿದಿನಿ' 'ಹಂಗಂದ್ರ ಅವತ್ತು ನನಗ್ಹೆಳಿದ್ದು ಸುಳ್ಳ ?' ನಾನು ಏನೂ ಮಾತಾಡಲಿಲ್ಲ, ಅವಳಿಗೆ ನಾನು ಯಾವಾಗ 'ಸಿಗರೇಟ್ ಬಿಡೋ ಪ್ರಯತ್ನದಲ್ಲಿದಿನಿ' ಅಂತ ಹೇಳಿದ್ದೇನೋ ಏನೋ ಅಥವಾ ಆ ಕ್ಷಣಕ್ಕೆ ಅವಳಿಂದ ಪಾರಾಗಬೇಕು ಅನ್ಕೊಂಡು ಹಾಗೆ ಹೇಳಿರೋ ಸಾಧ್ಯತೆಗಳಿವೆ. ಆ ಮಾತು ಒತ್ತಟ್ಟಿಗಿರಲಿ, ಅಸಲಿಗೆ ಅವಳು ನೆನಪಾದದ್ದೇ ಈಗ ಏಳು ವರ್ಷಗಳ ನಂತರ ಅವಳನ್ನ ನೋಡಿದ ಮೇಲೆ!. ಬೇರೆ ಸ್ಟಾಪಿಗೆ ಇಳಿಯುವ ಬದಲು ಗೊತ್ತಾಗದೆ ಗಡಿಬಿಡಿಯಲ್ಲಿ ಇಲ್ಲೇ ಬಸ್ ನಿಂದ ಇಳಿದಿದ್ದಳು - ಬಹುಶಃ ಅದೇ ಅದೃಷ್ಟ. 'ನಡಿ ಒಳಗ, ಚಾ ಕುಡಿಯುನ' ಅಂದೆ 'ಬ್ಯಾಡ ಇಲ್ಲೇ ಫುಟ್ ಪಾತ್ ಮೇಲೆ ಚಾ ಕುಡುದ್ರಾತು, ನಿನಗೂ ಸಿಗರೇಟ್ ಸೇದಾಕಾ ಆರಾಮಾಕತಿ'

No comments:

Post a Comment